 ಜಾರು ಮುಖ
ಸ್ತರ ಭಂಗವಾದಾಗ ಭಂಗದ ಎರಡೂ ಬದಿಯಲ್ಲಿರುವ ಭಾಗಗಳು ಒಂದನ್ನೊಂದು ಉಜ್ಜಿಕೊಂಡು ಮೇಲಕ್ಕೋ ಕೆಳಕ್ಕೋ ಜಾರುತ್ತವೆ. ಆಗ ಘರ್ಷಣದಿಂದಾಗಿ ಶಿಲೆಯ ಭಾಗ ಮೆರಗನ್ನೂ ಸೂಕ್ಮವಾದ ಗೀರು ಹಾಗೂ ಏಣುಗಳನ್ನೂ ಪಡೆಯುತ್ತದೆ. ಹೀಗೆ ಉದ್ಭವಿಸಿದ ಗೀರು ಮತ್ತು ಏಣುಗಳು ಕೆಲವು ಸಲ ದೊಡ್ಡವಾಗಿದ್ದು ಕಣ್ಣಿಗೆ ಕಾಣುವಂತಿರುವುವು. ಎರಡು ಗೀರುಗಳ ಮಧ್ಯದಲ್ಲಿ ಕೆಲ ಅಡಿಗಳಷ್ಟು ಆಳವಾದ ಸಾಲುಗಳಿರುತ್ತವೆ. ಗೀರು ಮತ್ತು ಏಣುಗಳು ಸಮಾಂತರವಾಗಿರುವುದು ಸಾಮಾನ್ಯ. ಅವು ಪಲ್ಲಟದ ದಿಕ್ಕನ್ನು ನಿರ್ದೇಶಿಸುತ್ತವೆ. ಇಂಥ ಲಕ್ಷಣಗಳಿರುವ ಸ್ತರಭಂಗದ ಭಾಗಕ್ಕೆ ಜಾರುಮುಖವೆಂದು ಹೆಸರು. ಈ ರೀತಿಯಾಗಿ ಉದ್ಭವಿಸಿರುವ ಗೀರುಗಳ ಅಥವಾ ಏಣುಗಳ ಮೇಲೆ ಬೆರಳನ್ನು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಸಿದರೆ ಒಂದು ದಿಕ್ಕಿನಲ್ಲಿ ನಯತೆ ಕಂಡುಬಂದರೆ ಇನ್ನೊಂದು ದಿಕ್ಕಿನಲ್ಲಿ ಒರಟುತನದ ಅನುಭವ ಆಗುತ್ತದೆ. ನಯತೆ ಕಂಡುಬರುವ ದಿಕ್ಕು ಸ್ತರ ಜಾರಿದ ದಿಕ್ಕನ್ನು ಸೂಚಿಸುತ್ತದೆ. ಕೆಲವೊಂದು ಸಲ, ಒಂದೇ ಸ್ತರ ಹಲವರು ಸಲ ಭಂಗಗೊಂಡಾಗ, ತೀರ ಇತ್ತೀಚಿನ ಭಂಗದ ಗೀರು ಮತ್ತು ಏಣುಗಳು ಮಾತ್ರ ಉಳಿದಿರುತ್ತವೆ. ಅದರ ಹಿಂದಿನ ಭಂಗಗಳಿಂದುಂಟಾದ ಗೀರು ಮತ್ತು ಏಣುಗಳು ಸಂಪೂರ್ಣವಾಗಿ ಅಥವಾ ಭಾಗಶಃ ಅಳಿಸಿ ಹೋಗಿರುತ್ತವೆ. ಇಂಥ ಪ್ರಸಂಗಗಳಲ್ಲಿ ಸ್ತರ ಜಾರಿದ ದಿಕ್ಕನ್ನು ಗುರ್ತಿಸುವುದು ಕೊಂಚ ಕಷ್ಟ.
(ಎಚ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ